ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಶಿಕ್ಷಣ ಸಂಸ್ಥೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ವಿಶ್ವ ಸಾರಸ್ವತ ಫೆಡರೇಶನ್ ಅಧ್ಯಕ್ಷ ಹಾಗೂ ಹಾಂಗ್ಯೊ ಐಸ್ಕ್ರೀಂ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ ಪೈ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು, 97 ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಇಂದು ನೀಡುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ಕಲಿಯುವ ಆಸಕ್ತಿ ಇರುವ ಸರಿ ಸುಮಾರು 50 ಬಡ ಪ್ರತಿಭಾವಂತ ಮಕ್ಕಳಿಗೆ ಬಹುತೇಕ ಎಲ್ಲವೂ ಉಚಿತ ಮಾಡಿದ್ದೇವೆ. ದಿನಕರ ದೇಸಾಯಿಯವರ ಆದರ್ಶವನ್ನು ಮುಂದಿಟ್ಟು ಶಿಕ್ಷಣ ದಾನಿಗಳಿಂದಲೇ ನಡೆಸಿಕೊಂಡು ಹೋಗುತ್ತಿರುವ ಸಂಸ್ಥೆ ಇದಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಟಾಪ್ 10 ರ್ಯಾಂಕ್ನಲ್ಲಿ ಪ್ರತಿ ವರ್ಷ ನಮ್ಮ ಶಾಲೆಯ ಐದರಿಂದ ಆರು ವಿದ್ಯಾರ್ಥಿಗಳಾದರೂ ಇದ್ದೇ ಇರುತ್ತಾರೆ ಎಂಬುದು ನಮಗೆ ಹೆಮ್ಮೆ. ಈ ಸಂಸ್ಥೆ ಗೆ ಪ್ರದೀಪ ಪೈಯವರು ತುಂಬಾ ನೆರವಾಗಿದ್ದಾರೆ ಎಂದು ತಿಳಿಸುತ್ತ ಎಲ್ಲ ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರದೀಪ ಪೈ, ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಬಹಳ ಉತ್ತಮವಾದ ಸಂಸ್ಥೆ. ಸಂಸ್ಕಾರಯುತ ಸಾತ್ವಿಕ ಶಿಕ್ಷಣಕ್ಕೆ ಈ ಸಂಸ್ಥೆ ಹೆಸರುವಾಸಿ. ಉತ್ತರ ಕನ್ನಡದ ಕೊಂಕಣ ಶಾಲೆಯಲ್ಲಿ ಪ್ರವೇಶಾತಿ ಕೊಡಿಸಲು ಮುರಳೀಪ್ರಭುರವರಿಗೆ ಸ್ವಲ್ಪ ಫೋನಾಯಿಸಿ ಪ್ರಭಾವಿಸಲು ಹಲವಾರು ಮಂದಿ ಪ್ರತಿ ವರ್ಷ ತಮಲ್ಲಿ ನಿವೇದಿಸಿಕೊಳ್ಳುತ್ತಾರೆಂದರೆ ಅದು ಈ ಸಂಸ್ಥೆ ಕೊಡಮಾಡುತ್ತಿರುವ ಉತ್ಕೃಷ್ಟ ಶಿಕ್ಷಣ ಹಾಗೂ ಇಲ್ಲಿಯ ಶಿಕ್ಷಕರುಗಳ ಕಾರ್ಯತತ್ಪರತೆ ಹಾಗೂ ಅವಿರತ ಪ್ರಯತ್ನವೇ ಕಾರಣ ಎಂದರು.
ಶೆಣೈರವರು ಸುಮಾರು 195 ಮಕ್ಕಳಿಗೆ ಅಂದಾಜು 50 ಲಕ್ಷ ರೂಪಾಯಿಗಳನ್ನು ಶಿಷ್ಯವೇತನದ ರೂಪದಲ್ಲಿ ಶಿಕ್ಷಣಕ್ಕೆ ಕೊಡುತ್ತಾರೆ. ವಿಶ್ವ ಕೊಂಕಣಿ ಸಂಸ್ಥೆಗೂ ಐವತ್ತು ಲಕ್ಷ ನೀಡುತ್ತಾರೆ. ಹಾಗಾಗಿ, ಇವತ್ತು ಶಿಕ್ಷಣದ ಕಾರ್ಯಕ್ರಮ ಆಗಿರೋದರಿಂದ ನಾನು ಅವರನ್ನು ಜೊತೆಗೆ ಕರೆದುಕೊಂಡು ಬಂದೆ. ನಾನು ಮಂಗಳೂರಿಗೆ ಹೋಗಿ ಉದ್ಯಮ ಆರಂಭಿಸಲು ಕಾರಣ ಶೆಣೈರವರು. ಅವರು ನಮ್ಮ ಶ್ರೀಕೃಷ್ಣ ಮಿಲ್ಕ್ನ ಚಾರ್ಟೆಡ್ ಅಕೌಂಟಂಟ್ ಕೂಡ ಆಗಿದ್ದವರು. ನಾವು ವಿಶ್ವ ಕೊಂಕಣಿ ಸಂಸ್ಥೆಯಿಂದ ಪ್ರತಿವರ್ಷ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿವೇತನ ಕೊಡುತ್ತಾ ಬಂದಿದ್ದೇವೆ. ಐವತ್ತು ಲಕ್ಷ, ಒಂದು ಕೋಟಿ, ಒಂದೂವರೆ ಕೋಟಿ, ಎರಡು ಕೋಟಿ ಹೀಗೆ ಕೊಡುತ್ತಾ ಬಂದು, ಈಗ ಸುಮಾರು ಮೂರುವರೆ ಕೋಟಿ ಪ್ರತಿವರ್ಷ ನಾವು ಸ್ಕಾಲರ್ಶಿಪ್ ಕೊಡುತ್ತಿದ್ದೇವೆ. 12 ವರ್ಷದಲ್ಲಿ ಸುಮಾರು 29 ಕೋಟಿ ಮೊತ್ತದ ಸ್ಕಾಲರ್ಶಿಪ್ ಕೊಟ್ಟಿದ್ದೇನೆ. ವಿದೇಶದಲ್ಲಿ ಕಲಿಯುವ ಮಕ್ಕಳಿಗೆ ವರ್ಷಕ್ಕೆ ಒಂದು ಲಕ್ಷದಂತೆ ಸ್ಕಾಲರ್ಶಿಪ್ ಕೊಡುತ್ತಾ ಬಂದಿದ್ದೇವೆ. ನನ್ನ ತಾಯಿ ಕುಮಟಾದವರಾದ್ದರಿಂದ ನನಗೂ ಕುಮಟಾಕ್ಕೂ ರಕ್ತಸಂಬಂಧ ಇದೆ. ಹಾಗಾಗಿ ನಾನು ನನ್ನ ತಾಯಿಯವರ ಹೆಸರಿನಲ್ಲಿ ಈ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಇಪ್ಪತ್ತೈದು ಸಾವಿರ ಮೊತ್ತದ ಸ್ಕಾಲರ್ಶಿಪ್ ನೀಡುತ್ತೇನೆ ಎಂದು ಘೋಷಿಸಿದರು.
ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷರಾದ ಹಾಗೂ ಖ್ಯಾತ ಲೆಕ್ಕ ಪರಿಶೋಧಕರಾದ ಜಿ. ನಂದಗೋಪಾಲ ಶೆಣೈ ಮಾತನಾಡಿ ಪಾಲಕರಿಗೊಂದು ಕಿವಿಮಾತು ಹೇಳಲು ಬಯಸುತ್ತೇನೆ. ನಿಮ್ಮ ತಂದೆ ತಾಯಿಗಳಿಗೆ ನೀವೇ ಆದರ್ಶವಾಗಿರಬೇಕು. ನಿನ್ನಲ್ಲಿ ಆ ಶಕ್ತಿ ಇದೆ ಎಂದು ಮಕ್ಕಳಲ್ಲಿ ಅಂತಹ ಸಂಸ್ಕಾರ ತುಂಬಬೇಕು. ಜೀವನದಲ್ಲಿ ಸೋತರೆ ಹಿಂಜರಿಯಬಾರದು. ಸೋಲೇ ಮುಂದೆ ಯಶಸ್ಸಿನ ಮೆಟ್ಟಿಲು ಎಂಬುವುದನ್ನು ಮಕ್ಕಳಿಗೆ ಮನವರಿಕೆ ಮಾಡಬೇಕು. ವೃತ್ತಿಗೆ ಸಂಬಂಧಿಸಿದಂತೆ ಮಕ್ಕಳು ಮುಂದೆ ಭವಿಷ್ಯ ದಲ್ಲಿ ಬೇರೆ ಬೇರೆ ಕ್ಷೇತ್ರಕ್ಕೆ ಹೋಗಬೇಕೆಂದು ಮನಸ್ಸಿಟ್ಟುಕೊಂಡಿರುತ್ತಾರೆ. ಈ ತರಹದ ಸ್ಕಾಲರ್ಶಿಪ್ಗಳು ಮಕ್ಕಳಿಗೆ ಹೊಸ ಹುರುಪು ನೀಡುತ್ತದೆ. ಅವರು ಗುರಿ ತಲುಪಲು ಅನುಕೂಲವಾಗುತ್ತದೆ. ಸ್ಕಾಲರ್ಶಿಪ್ ಪಡೆದು ಮುಂದೆ ನೀವೂ ಕೊಡುವವರಾಗಿ. ನೀವೂ ಹತ್ತು ಮಕ್ಕಳಿಗೆ ಕೊಡುವವರಾದರೆ ದೇಶದ ಬೆಳವಣಿಗೆಗೂ ಕಾರಣವಾಗುತ್ತದೆ. ಹಾಗಾಗಿ ಇಂದು ಪಡೆದ ಸ್ಕಾಲರ್ಶಿಪ್ ನಿಮ್ಮ ಉತ್ತಮ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜ್ಯುಕೇಶನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕರವರು ವಿದ್ಯಾರ್ಥಿ ವೇತನ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ಪ್ರದೀಪ ಪೈ ಹಾಗೂ ನಂದಗೋಪಾಲ ಶೆಣೈರವರು 97 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಪ್ರದೀಪ ಪೈ ಹಾಗೂ ನಂದಗೋಪಾಲ ಶೆಣೈರವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸಂಸ್ಥೆಯ ಪರವಾಗಿ ಗೌರವಿಸಲಾಯಿತು..
ಶಿಕ್ಷಕ ಚಿದಾನಂದ ಭಂಡಾರಿಯವರು ಎಲ್ಲರನ್ನು ಸ್ವಾಗತಿಸಿದರು, ಶಿಕ್ಷಕಿ ವಿನಯಾ ಶಾನಭಾಗ ಅಭಿನಂದಿಸಿದರು, ಪ್ರಕಾಶ ಗಾವಡಿ, ಶಾಹಿದಾ ಶೆಟ್ಟಿ ನಿರೂಪಿಸಿದರು. ಸಂಸ್ಥೆಯ ವಿಶ್ವಸ್ಥರು, ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.