ಕುಮಟಾ: 73ನೆಯ ಗಣರಾಜ್ಯೋತ್ಸವದ ಅಂಗವಾಗಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಧ್ವಜಾರೋಹಣಗೈದು ಮಾತನಾಡುತ್ತ, ಪ್ರಜಾಪ್ರಭುತ್ವ ನಮ್ಮ ಪಾಲಿಗೆ ವರದಾನವಾದರೂ ಇಂದು ಅದರ ಪ್ರಜಾಪ್ರಭುತ್ವದ ಅಗತ್ಯವಿದೆಯೇ ಎಂದು ವಿಮರ್ಶಿಸುವ ಪರಿಸ್ಥಿತಿ ಉಂಟಾದದ್ದು ವಿಪರ್ಯಾಸವೇ ಸರಿ. ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ರವರ ಅಧ್ಯಕ್ಷತೆಯಲ್ಲಿ ರೂಪಿತವಾದ ಈ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯನು ಓದಿ, ಅರ್ಥೈಸಿಕೊಂಡು, ಅದರ ಆಶಯಗಳನ್ನು ಅಳವಡಿಸಿಕೊಂಡು ಬದುಕಬೇಕಾದ ಅಗತ್ಯತೆ ಇದೆ ಎಂದರು. ಸಂವಿಧಾನವನ್ನು ಗೌರವಿಸುವ, ದೇಶದ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಭಾರತವನ್ನು ವಿಶ್ವಗುರುವಾಗಿ ಮಾಡಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕ, ಟ್ರಸ್ಟಿಗಳಾದ ಅನಂತ ಶಾನಭಾಗ, ವಿಶ್ರಾಂತ ಮುಖ್ಯಾಧ್ಯಾಪಕರಾದ ಎಂ.ಎಂ.ಹೆಗಡೆ, ವಿಧಾತ್ರಿಯ ಗುರುರಾಜ ಶೆಟ್ಟಿ, ಅಂಗಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಲ್ಪಾ ಸಂಗಡಿಗರು ರಾಷ್ಟ್ರಗೀತೆ, ರೈತಗೀತೆ, ವಂದೇ ಮಾತರಂ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಕೋವಿಡ್ ನಿಬಂಧನೆಯ ಪರಿಣಾಮ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮವು ಸರಳವಾಗಿ ಸಂಪನ್ನಗೊಂಡಿತು.