ಕೊಂಕಣಿ ಭಾಷೆಗೆ ದಿವಗಂತ ಮಾಧವ ಮಂಜುನಾಥ ಶಾನಭಾಗ ಇವರ ಕೊಡುಗೆ ಅಪಾರ : ಉಷಾ ರಾಣೆ

Share happily:

ಕುಮಟಾ (ಮಂಗಳವಾರ 07-01-2020) : ಮಾಧವ ಮಂಜುನಾಥ ಶಾನಭಾಗ ಅವರು ಮಾತೃಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ ವ್ಯಕ್ತಿಯಾಗಿದ್ದು ಭಾಷೆಯ ಪ್ರಗತಿಗಾಗಿ ಅನುಪಮವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಬದುಕು ಎಲ್ಲರಿಗೂ ಮಾದರಿಯಾದದ್ದು ಎಂದು ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಷತ್ನ ಅಧ್ಯಕ್ಷೆ ಶ್ರೀಮತಿ ಉಷಾ ರಾಣೆ ಅಭಿಪ್ರಾಯ ಪಟ್ಟರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ದಿನಾಂಕ 07-01-2020 ಮಂಗಳವಾರದಂದು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ಜರುಗಿದ ದಿವಂಗತ ಮಾಧವ ಮಂಜುನಾಥ ಶಾನಭಾಗ ಸ್ಮರಣಾರ್ಥ ವಿಚಾರ ಸಂವಾದ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕೊಂಕಣಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗೆ ನಮ್ಮ ಹಿರಿಯರು ನೀಡಿದ ದೇಣಿಗೆಯನ್ನು ವಿದ್ಯಾರ್ಥಿಗಳು ಚೆನ್ನಾಗಿ ತಿಳಿದುಕೊಂಡು ಉತ್ತಮ ಮಾರ್ಗವನ್ನು ಅನುಸರಿಸಬೇಕೆಂದು ಉಷಾ ರಾಣೆಯವರು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ನಡೆದ ವಿಚಾರ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಕೊಂಕಣಿ ಸಾಹಿತಿ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ.ಶಿವರಾಮ ಕಾಮತ ಅವರು ದಿವಂಗತ ಮಾಧವ ಮಂಜುನಾಥ ಶಾನಭಾಗ ಅವರು ಭಾಷೆಗಾಗಿ ನೀಡಿದ ಕೊಡುಗೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿ ಮಂಜುನಾಥ ಶಾನಭಾಗರು ಮಲಗಿರುವ ಕೊಂಕಣಿ ಭಾಷಿಕರನ್ನು ಎಬ್ಬಿಸಿ ಕಣ್ಣು ತೆರೆಸುವ ಕೆಲಸ ಮಾಡಿದರು. ಅದರ ಫಲವಾಗಿ ರಾಷ್ಟ್ರಮಟ್ಟದಲ್ಲಿ ಕೊಂಕಣಿಯ ಕಾರ್ಯಕ್ರಮಗಳು ಜರುಗತ್ತಲಿವೆ ಎಂದು ಮಾಧವ ಶಾನಭಾಗ ಅವರ ಗುಣಗಾನ ಮಾಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಮುಖ್ಯಾಧ್ಯಾಪಕಿ ಜ್ಞಾನದಾ ಶಾನಭಾಗ ಅವರು ಮಾಧವ ಮಂಜುನಾಥ ಶಾನಭಾಗರ ವ್ಯಕ್ತಿತ್ವದ ಪರಿಚಯ ಮಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದರು.

ಅತಿಥಿಗಳಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಹಿರಿಯ ವಿಶ್ವಸ್ಥ ರಮೇಶ ಪ್ರಭು ಮಾತನಾಡಿ ಮಾತೃಭಾಷೆಯ ಮಹತ್ವ ಹಾಗೂ ಅದರ ಉಳಿವಿಗೆ ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ವಿವರಿಸಿದರು.ಅಧ್ಯಕ್ಷ ಸ್ಥಾನ ವಹಿಸಿದ ಕೊಂಕಣಿ ಪರಿಷದ್ ಕುಮಟಾದ ಅಧ್ಯಕ್ಷ ಹಾಗೂ ಕೊಂಕಣಿ ಸಾಹಿತಿ ಅರುಣ ಉಭಯಕರ್ ಮಲ್ಲಾಪುರ ಇವರು ಕಾರ್ಯಕ್ರಮ ಯಶಸ್ವಿಯಾಗಿ ಸಂಘಟನೆ ಆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶುಭಕೋರಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಚಾಲಕ ಹಾಗೂ ಕೊಂಕಣಿ ಅಕಾಡೆಮಿಯ ಸದಸ್ಯ ಚಿದಾನಂದ ಭಂಡಾರಿ ಅವರು ಡಾ.ಜಗದೀಶ್ ಪೈ ಅಧ್ಯಕ್ಷತೆಯ ಅಕಾಡೆಮಿಯ ಮೊದಲ ಕಾರ್ಯಕ್ರಮ ದಿವಂಗತ ಮಾಧವ ಮಂಜುನಾಥ ಶಾನಭಾಗ ನೆನಪಿನಲ್ಲಿ‌ ಕುಮಟಾದಲ್ಲಿ ಜರುಗುತ್ತಿರುವುದು ಸಂತಸದ ವಿಷಯವಾಗಿದ್ದು ಮುಂಬರುವ ದಿನಗಳಲ್ಲಿ ಅಕಾಡೆಮಿಯ ವತಿಯಿಂದ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದರು.

ವೇದಿಕೆಯಲ್ಲಿ ಡಾ ಸುಲೋಚನಾ ರಾವ್, ಶ್ರೀಮತಿ ಸುಮಾ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ  ಡಿ.ಎಂ.ಕಾಮತ, ಎಸ್.ಜಿ.ನಾಯ್ಕ, ರೋಹಿದಾಸ ಗಾವಡಿ, ಮಹೇಶ ನಾಯ್ಕ ಮೊದಲಾದವರು ಹಾಜರಿದ್ದರು.

ಕೊಂಕಣಿ ಪರಿಷದ್‌ನ ನಿಕಟಪೂರ್ವ ಕಾರ್ಯದರ್ಶಿ ಅರುಣ ಮಣಕೀಕರ್ ವಂದನಾರ್ಪಣೆಗೈದರು. ಕುಮಾರಿ ಶ್ರೇಯಾ  ಮತ್ತು ನಮಿತಾ  ಪ್ರಾರ್ಥಿಸಿದರು. ಕೊಂಕಣಿ ಪರಿಷದ್ ಕಾರ್ಯದರ್ಶಿ ನಿರ್ಮಲಾ ಪ್ರಭು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕೊಂಕಣಿ ಭಾವಗೀತೆ, ಭಕ್ತಿಗೀತೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಕಾರ್ಯಕ್ರಮದ ಕೊನೆಯಲ್ಲಿ ನೀಡಲಾಯಿತು.

Share happily:

Related posts

Leave a Comment