ಕೊಂಕಣ ಎಜ್ಯುಕೇಶನ್ ಟ್ರಸ್ಟ್ ದಿವಂಗತ ಬಿ. ಕೆ. ಭಂಡಾರಕರರಿಗೆ ಚಿರಋಣಿ : ಮುರಳೀಧರ ಪ್ರಭು

Share happily:

ಕೊಂಕಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ
“ಜ್ಞಾನಾಮೃತ 2019” ರಸಪ್ರಶ್ನೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ

ಕುಮಟಾ ದಿ. 27-12-2019: ಶಿಕ್ಷಣ ಪ್ರೇಮಿ, ಕೊಡುಗೈ ದಾನಿ ಬಂಟ್ವಾಳ ಕೃಷ್ಣ ಭಂಡಾರಕರ ಅವರ ಬದುಕು ಎಲ್ಲರಿಗೂ ಮಾದರಿಯಾಗಿದ್ದು ನಮ್ಮ ಸಂಸ್ಥೆಗೆ ಅವರು ನೀಡಿದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯವಾದದ್ದು. ಬಲಗೈ ನೀಡಿದ್ದು ಎಡಗೈಗೆ ತಿಳಿಯಬಾರದು ಎಂಬ ನಿಲುವು ಅವರದಾಗಿತ್ತು ಎಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು ಅವರು ಅಭಿಪ್ರಾಯಪಟ್ಟರು.

ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ದಿನಾಂಕ 27-12-2019 ಶುಕ್ರವಾರದಂದು ಆಯ್ದ ಪ್ರೌಢಶಾಲೆಗಳ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗಾಗಿ ಜರುಗಿದ “ಜ್ಞಾನಾಮೃತ 2019” ರಸಪ್ರಶ್ನೆ ಹಾಗೂ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ದಿವಂಗತ ಬಿ. ಕೆ.  ಭಂಡಾರಕರ ಅವರಿಗೆ ನುಡಿನಮನ ಸಲ್ಲಿಸುತ್ತ ಮಾತನಾಡಿದ ಅವರು, ದಕ್ಷಿಣ ಕನ್ನಡದಿಂದ ನಮ್ಮ ಜಿಲ್ಲೆಗೆ ಬಂದು ಯಶಸ್ವಿಯಾಗಿ ಉದ್ಯಮ ನೆಡೆಸಿದ ಭಂಡಾರಕರ ಅವರು ಉತ್ತರಕನ್ನಡದಲ್ಲಿ ನಿರುದ್ಯೋಗ ತೊಲಗಬೇಕು, ವಿದ್ಯಾರ್ಥಿಗಳು ಬುದ್ಧಿವಂತರಾಗಿ ಸಮಾಜದಲ್ಲಿ ಮನ್ನಣೆ ಗಳಿಸಬೇಕೆಂಬ ಆಶಯ ಅವರದಾಗಿತ್ತು. ಆದ ಕಾರಣವೇ ಇಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆದಾಯ ತೆರಿಗೆ ಇಲಾಖೆಯ ನಿವೃತ್ತ ಉಪ ಕಮೀಷನರ್ ಶ್ರೀ ಗೋವಿಂದಪ್ಪ ಬ. ಗೌಡಪ್ಪಗೋಳ ಹುಬ್ಬಳ್ಳಿ ಅವರು, ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಇಂದು ಲಭಿಸುತ್ತಿದೆ. ದೇಶ ಸರ್ವಾಂಗೀಣ ಪ್ರಗತಿಯತ್ತ ಸಾಗುತ್ತಿದೆ. ಇಂದು ನಮ್ಮ ಮುಂದೆ ಹಲವಾರು ಆಯ್ಕೆಗಳಿವೆ. ಒಬ್ಬ ಸಾಗಿದ ದಿಕ್ಕಿನಲ್ಲಿ ಇನ್ನೊಬ್ಬ ವಿವೇಚನೆ ಇಲ್ಲದೆ ಸಾಗಬಾರದು. ವಾಣಿಜ್ಯ ವಿಭಾಗದಲ್ಲಿ ವಿಫುಲ ಅವಕಾಶ ಇರುವುದರಿಂದ ಆ ಬಗ್ಗೆಯೂ ವಿದ್ಯಾರ್ಥಿಗಳು ವಿಚಾರಮಾಡಬೇಕೆಂದು ಮಾರ್ಗದರ್ಶನ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಶ್ವಾಸ ಹೆಗಡೆಯವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಈ ದಿನಗಳಲ್ಲಿ ಯಾವೆಲ್ಲ ಸಾಧ್ಯತೆಗಳು ತೆರೆದುಕೊಂಡಿವೆ ಎಂಬುದರ ಮೇಲೆ ಉಜ್ವಲ ಭವಿಷ್ಯದ ಮಾರ್ಗಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಇತ್ತೀಚೆಗೆ ಕೆಎಎಸ್ ಪರೀಕ್ಷೆಯಲ್ಲಿ ಅನುಪಮ ಸಾಧನೆಗೈದು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ನೇಮಕಗೊಂಡ ಗಣೇಶ್ ಎನ್. ನಾಯ್ಕ ಇವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಹಾಗೂ ಕೆಎಎಸ್ ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬ ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಕೊಂಕಣ ಸರಸ್ವತಿ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಪೂರೈಸಿ ಉತ್ತಮ ಸಾಧನೆ ಮಾಡುತ್ತಿರುವ ಕುಮಾರಿ ಸ್ವಾತಂತ್ರ್ಯ ನಾಯಕ, ಐಶ್ವರ್ಯ ಆರ್. ನಾಯ್ಕ, ಪೂಜಾ ಇವರುಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ವಿಠ್ಠಲ ಆರ್. ನಾಯಕ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವಿಶ್ವಸ್ಥರಾದ ಡಿ. ಡಿ. ಕಾಮತ, ರಮೇಶ ಪ್ರಭು, ಶ್ರೀಮತಿ ವೈಷ್ಣವಿ ಭರತ ಭಂಡಾರಕರ, ಪ್ರಾಚಾರ್ಯೆ ಡಾ. ಸುಲೋಚನಾ ರಾವ್, ಹಿರಿಯ ಶಿಕ್ಷಕ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ನಿರ್ವಾಹಕರಾದ ಎಚ್. ಆರ್. ರವಿಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಚಿದಾನಂದ ಭಂಡಾರಿ ಸ್ವಾಗತ ಪರಿಚಯ ಮಾಡಿದರು. ಡಾ. ಸುಲೋಚನಾ ರಾವ್ ವಂದಿಸಿದರು. ಕುಮಾರಿ ತೇಜಸ್ವಿನಿ ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ಶ್ರೀಲಕ್ಷ್ಮೀ ಭಟ್ಟ ಹಾಗೂ ವೈಷ್ಣವಿ ಮೇಸ್ತಾ ಕಾರ್ಯಕ್ರಮ ನಿರೂಪಿಸಿದರು. ನಂತರ ನೆಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಿರ್ಮಲಾ ಕಾನ್ವೆಂಟ್ ಕುಮಟಾ ಪ್ರಥಮ, ನ್ಯೂ ಇಂಗ್ಲೀಷ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹೊನ್ನಾವರ ದ್ವಿತೀಯ, ಸಿ.ವಿ.ಎಸ್.ಕೆ ಪ್ರೌಢಶಾಲೆ ತೃತೀಯ ಸ್ಥಾನವನ್ನು ಪಡೆಯಿತು. ನಿವೃತ್ತ ಪ್ರಾಂಶುಪಾಲರಾದ ಡಿ. ಎನ್. ಭಟ್ಟ ಇವರು ರಸಪ್ರಶ್ನೆ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದರು.

Share happily:

Related posts

Leave a Comment