ಕುಮಟಾ: ಹೊನ್ನಾವರದ ಹೋಲಿ ರೋಸರಿ ಶಾಲೆಯಲ್ಲಿ ನಡೆದ ಈ ಸಾಲಿನ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯದ ಟಾಪ್ ಟೆನ್ ರ್ಯಾಂಕ್ಗಳಲ್ಲಿ ಒಟ್ಟು ಹತ್ತು ರ್ಯಾಂಕ್ಗಳನ್ನು ತಮ್ಮದಾಗಿಸಿ ಹೊಸ ಭಾಷ್ಯೆ ಬರೆದು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಕೊಂಕಣದ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗುವುದರ ಮೂಲಕ ಕೇವಲ ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ತಾವು ಮುಂದು ಎಂದು ಸಾಬೀತುಪಡಿಸಿದ್ದಾರೆ.
ಭಾವಗೀತೆ ಸ್ಪರ್ಧೆಯಲ್ಲಿ ಶಿಲ್ಪಾ ಭಟ್ಟ, ಆಶುಭಾಷಣದಲ್ಲಿ ಕಾರ್ತಿಕ ನಾಯ್ಕ, ಕೊಂಕಣಿ ಭಾಷಣದಲ್ಲಿ ನಮಿತಾ ಭಟ್, ರಂಗೋಲಿಯಲ್ಲಿ ಖುಷಿ ಭಂಡಾರಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜನಪದಗೀತೆಯಲ್ಲಿ ಅಭೇದಾ ಭಟ್ಟ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಈ ಮೂಲಕ ಅತೀ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲೆಯೆಂಬ ಹೆಗ್ಗಳಿಕೆಗೆ ಸಿ.ವಿ.ಎಸ್.ಕೆ ಪಾತ್ರವಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖಾಧ್ಯಾಪಕರು, ಶಿಕ್ಷಕರು, ಪಾಲಕರು ಹರ್ಷ ವ್ಯಕ್ತಪಡಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.