ಕೊಂಕಣದಲ್ಲಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ

Share happily:

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ ವತಿಯಿಂದ ಪ್ರತಿಸಲದಂತೆ ಈ ವರ್ಷವೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗಾಗಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ ಸು.ರಾಮಣ್ಣ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಈ ದೇಶದ ಪ್ರತಿಯೊಂದು ಮಗು ದೇಶಭಕ್ತನಾಗಬೇಕು. ನಾವು ಮಾಡುವ ಕೈಂಕರ್ಯ ಭಾರತ ಮಾತೆಯ ಗೌರವವನ್ನು ಹೆಚ್ಚಿಸಬೇಕು ಎಂದು ಹಲವಾರು ಮಹಾಪುರುಷರ ಉದಾಹರಣೆಯೊಂದಿಗೆ ವಿವರಿಸಿದರು. ಆಶೀರ್ವಾದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಅಪಾರ ಮಹತ್ವವಿದ್ದು, ಪುರಾಣದಲ್ಲಿ ಕೃಷ್ಣ ದ್ರೌಪದಿಗೆ, ಭೀಷ್ಮ-ದುರ್ಯೋಧನರಿಗೆ, ಗಾಂಧಾರಿ-ಪಾಂಡವರಿಗೆ ಆಶೀರ್ವಾದ ಮಾಡಿದ ಸನ್ನಿವೇಶವನ್ನು ರೋಮಾಂಚನಕಾರಿಯಾಗಿ ಬಣ್ಣಿಸಿದರು. ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಯಾವತ್ತೂ ಶ್ಲಾಘನೆಗೆ ಒಳಗಾಗಿದೆ, ಇದು ಸರ್ವರಿಗೂ ತಿಳಿದ ವಿಚಾರವೇ ಆಗಿದೆ ಎಂದರು.

ಕಾರ್ಯಕ್ರಮದ ಅತಿಥಿಯಾಗಿ ಉಪಸ್ಥಿತರಿದ್ದ ಇದೇ ಶಾಲೆಯ ಹಳೆಯ ವಿದ್ಯಾರ್ಥಿನಿ ಡಾ.ಜಯಶ್ರೀ ಶ್ರೀಕಾಂತ ಭಟ್ಟ ಮಾತನಾಡಿ, ಈ ಶಾಲೆ ನನಗೆ ಭಾರತೀಯ ಸಂಸ್ಕೃತಿಯ ವಿಚಾರಗಳನ್ನು ತಿಳಿಸಿಕೊಟ್ಟಿದೆ. ಅದಲ್ಲದೆ, ನನ್ನ ಬೆಳವಣಿಗೆಗೆ ಈ ಶಾಲೆ ಪೂರಕ ವಾತಾವರಣವನ್ನು ಕಲ್ಪಿಸಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ನೀವು ಕೂಡ ಮುಂದೆ ಉಜ್ವಲ ಭವಿಷ್ಯವನ್ನು ಪಡೆಯುವಿರಿ ಎಂದು ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟಿಗಳಾದ ಶೇಷಗಿರಿ ಎನ್‌. ಶಾನಭಾಗ ಹೆರವಟ್ಟಾ ಮಾತನಾಡಿ ಎಲ್ಲಾ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರಿಗೆ ಶುಭ ಹಾರೈಸಿದರು.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ರ‍್ಯಾಂಕ್‌ಗಳಿಸಿದ ೮ ವಿದ್ಯಾರ್ಥಿಗಳು ಹಾಗೂ ಪಿಯುಸಿಯಲ್ಲಿ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ಜೊತೆಗೆ ಅತ್ಯುತ್ತಮ ಸಾಧನೆಗೈದ ಸುಮಾರು 84 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸಮಸ್ತ ಶಿಕ್ಷಕ ವೃಂದದವರಿಗೆ ಪುರಸ್ಕಾರದೊಂದಿಗೆ ಅಭಿನಂದಿಸಲಾಯಿತು.

ಟ್ರಸ್ಟಿಗಳಾದ ರಮೇಶ ಪ್ರಭು ಸ್ವಾಗತಿಸಿ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಮುರಲೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಚಿದಾನಂದ ಭಂಡಾರಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಿವಿಎಸ್‌ಕೆ ಮುಖ್ಯಾಧ್ಯಾಪಕಿ ಸುಮಾ ಪ್ರಭು, ಸರಸ್ವತಿ ಪಿಯು ಕಾಲೇಜಿನ ಪ್ರಾಚಾರ್ಯ ಮಹೇಶ ಉಪ್ಪಿನ ಫಲಿತಾಂಶ ವಿಶ್ಲೇಷಿಸಿದರು. ಮುಖ್ಯಾಧ್ಯಾಪಕಿಯರಾದ ಸಾವಿತ್ರಿ ಹೆಗಡೆ, ಸುಜಾತಾ ನಾಯ್ಕ, ಶೈಕ್ಷಣಿಕ ಸಲಹೆಗಾರರಾದ ಆರ್‌.ಎಚ್‌.ದೇಶಭಂಡಾರಿ ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರಕಾಶ ಗಾವಡಿ ಹಾಗೂ ಅಮಿತಾ ಗೋವೆಕರ್‌ ನಿರೂಪಿಸಿದರು. ಶಿಕ್ಷಕ ಶಿವಾನಂದ ಭಟ್ಟ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳಾದ ತೇಜಸ್ವಿನಿ ಸಂಗಡಿಗರು ದೇಶಭಕ್ತಿಗೀತೆ ಹಾಡಿದರು. ಸು.ರಾಮಣ್ಣನವರ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Share happily:

Related posts

Leave a Comment