ರಾಜ್ಯಕ್ಕೆ ಕುಮಟಾದ ‘ಕೊಂಕಣ’ವೇ ಫರ್ಸ್ಟ್ & ಬೆಸ್ಟ್ (ರಾಜ್ಯದ ಟಾಪ್ 10 ಪಟ್ಟಿಯಲ್ಲಿ ಕೊಂಕಣದ ವಿದ್ಯಾರ್ಥಿಗಳದ್ದೇ ದರ್ಬಾರ್)

Share happily:

ಕುಮಟಾ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರತಿಸಲದಂತೆ ಈ ವರ್ಷವೂ ಶೇ.100ರಷ್ಟಾಗಿದ್ದು, ರಾಜ್ಯಮಟ್ಟಕ್ಕೆ ಪ್ರಥಮ ರ‍್ಯಾಂಕ್ ಪಡೆಯುವುದರ ಮೂಲಕ ರಾಜ್ಯದಲ್ಲಿಯೇ ಅತ್ಯುತ್ತಮ ಫಲಿತಾಂಶ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಾಲೆಯ 7 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಟಾಪ್ 10 ರ‍್ಯಾಂಕಿಂಗ್ ಪಟ್ಟಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ವಿದ್ಯಾರ್ಥಿನಿ ನಾಗಾಂಜಲಿ ಪರಮೇಶ್ವರ ನಾಯ್ಕ ಪೂರ್ಣಾಂಕ (625 ಕ್ಕೆ 625) ಗಳಿಕೆಯ ವಿಶಿಷ್ಟ ಹಾಗೂ ಅಪರೂಪದ ಚಿನ್ನದ ಸಾಧನೆಗೈದು ಸಂಸ್ಥೆಯ ಘನತೆಯನ್ನು ಉತ್ತುಂಗಕ್ಕೇರಿಸಿದ್ದು ಮಾತ್ರವಲ್ಲದೆ ಇಡೀ ರಾಜ್ಯವೇ ಉತ್ತರ ಕನ್ನಡದ ಕುಮಟಾದತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ. ಇವಳಿಗೆ ಸಾಥ್ ನೀಡಿದ ಇದೇ ಪ್ರೌಢಶಾಲೆಯ ಇನ್ನೂ 6 ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ರ‍್ಯಾಂಕ್‌ಗಳನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಸಂಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ನಾಗಾಂಜಲಿ ನಾಯ್ಕ ಶೇ.100 ಶಾಲೆಗೆ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ, ಸಿ.ವಿ.ನಮೃತಾ ಶೇ.99.52 ಶಾಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ 4ನೇ ಸ್ಥಾನ, ತೇಜಸ್ವಿನಿ ಶಾನಭಾಗ ಶೇ.99.04 ಶಾಲೆಗೆ ತೃತೀಯ ಹಾಗೂ ರಾಜ್ಯಕ್ಕೆ 7ನೇ ಸ್ಥಾನ, ಪ್ರಮೋದ ನಾಯ್ಕ, ಸುದಿತಿ ಕಾಮತ, ವಸುಧಾ ಪ್ರಭು ಶೇ.98.88 ರಾಜ್ಯಕ್ಕೆ 8ನೇ ಸ್ಥಾನ, ಅಪೂರ್ವಾ ಶಾನಭಾಗ ಶೇ.98.72 ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಕುಳಿತ ಎಲ್ಲಾ 129 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 78 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ, 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಉಳಿದ 24 ವಿದ್ಯಾರ್ಥಿಗಳು ಫರ್ಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ. ಇನ್ನು ಪ್ರಥಮ ಭಾಷೆ ಸಂಸ್ಕೃತದಲ್ಲಿ 38 ವಿದ್ಯಾರ್ಥಿಗಳು, ದ್ವಿತೀಯ ಭಾಷೆ ಇಂಗ್ಲೀಷ್‌ನಲ್ಲಿ 13 ವಿದ್ಯಾರ್ಥಿಗಳು, ತೃತೀಯ ಭಾಷೆ ಕನ್ನಡದಲ್ಲಿ 30 ವಿದ್ಯಾರ್ಥಿಗಳು, ಗಣಿತದಲ್ಲಿ 10 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ಓರ್ವ, ಹಾಗೂ ಸಮಾಜ ವಿಜ್ಞಾನದಲ್ಲಿ 9 ವಿದ್ಯಾರ್ಥಿಗಳು ಪೂರ್ಣಾಂಕವನ್ನು ಗಳಿಸಿದ್ದಾರೆ.

ಕಳೆದ 25 ವರ್ಷಗಳಿಂದ ಅವಿರತವಾಗಿ ಭಾರತೀಯ ಸಂಸ್ಕೃತಿಯ ತಳಹದಿಯಡಿ ತನ್ನದೇ ಶೈಲಿಯಲ್ಲಿ ಸುಸಂಸ್ಕೃತ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತ, ಯಾವುದೇ ಬಾಹ್ಯ ವದಂತಿಗಳಿಗೆ ಕಿವಿಗೊಡದೆ, ಇಂದಿನ ಸ್ಪರ್ಧಾತ್ಮಕ ಯುಗದ ಬೇಡಿಕೆಗಳಿಗನುಗುಣವಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸುವತ್ತ ಯಶಸ್ಸನ್ನು ಸಾಧಿಸಿರುವ ಕುಮಟಾದ ಹೆಮ್ಮೆಯ ಕೊಂಕಣ ಶಿಕ್ಷಣ ಸಂಸ್ಥೆಯು ಇತ್ತೀಚಿಗಷ್ಟೇ ತನ್ನ ರಜತ ಮಹೋತ್ಸವ ಸಂಭ್ರಮವನ್ನು ಅತ್ಯಂತ ವೈಭವಯುತವಾಗಿ ಆಚರಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳಿಂದ ಹೊರಹೊಮ್ಮಿದ ಈ ಸಾಧನೆ ನಿಜಕ್ಕೂ ಅತ್ಯಮೋಘ ಹಾಗೂ ಅವಿಸ್ಮರಣೀಯವಾದುದಾಗಿದೆ. ಶೈಕ್ಷಣಿಕ ಚಟುವಟಿಕೆಗಳಲ್ಲ್ಲಿ ಸದಾ ಮುಂಚೂಣಿಯಲ್ಲಿರುವ ಕೊಂಕಣ ಸಂಸ್ಥೆಯು ವಿದ್ಯಾರ್ಥಿಗಳ ಈ ಪರಿಯ ಸಾಧನೆಯ ಮೂಲಕ ರಾಜ್ಯದ ಜನತೆಯ ಲಕ್ಷ್ಯವನ್ನು ತನ್ನತ್ತ ಸೆಳೆದದ್ದಂತೂ ಅಕ್ಷರಶಃ ಸತ್ಯ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು, ಪಾಲಕರು ಹರ್ಷ ವ್ಯಕ್ತಪಡಿಸಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದ್ದಾರೆ.

Share happily:

Related posts

Leave a Comment