ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಹೈಸ್ಕೂಲ್‌ನಲ್ಲಿ ಇಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಉಗ್ರನೆಲೆಗಳನ್ನು ನಾಶಮಾಡಿ ಪುಲ್ವಾಮಾ ದಾಳಿಯ ವಿರುದ್ಧ ತೆಗೆದುಕೊಂಡ ಪ್ರತೀಕಾರ ಕ್ರಮವನ್ನು ಬೆಂಬಲಿಸಿ ವಿಜಯೋತ್ಸವವನ್ನು ಆಚರಿಸಲಾಯಿತು.
ಭಾರತ ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಘೋಷ ಮೊಳಗಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕ ಚಿದಾನಂದ ಭಂಡಾರಿ, ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಧ್ಯೇಯವಾಕ್ಯವೇ “ರಾಷ್ಟನಿರ್ಮಾಣ ಮಂದಿರವಿದು ಕೈ ಮುಗಿದು ಒಳಗೆ ಬಾ” ಎಂಬುದಾಗಿದ್ದು ನಮ್ಮ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಣಕಣದಲ್ಲೂ ರಾಷ್ಟ್ರಭಕ್ತಿಯನ್ನು ಮೂಡಿಸುವುದೇ ನಮ್ಮ ಗುರಿ. ಭಾರತದ ವೀರ ಸೈನಿಕರ ಸಾಹಸವನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಉಗ್ರರಿಂದ ಸಾವನ್ನಪ್ಪಿದ ಯೋಧರ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಭಾಗಿಗಳು. ನಾಳೆ ದೇಶದ ಮೇಲೆ ಯುದ್ಧದ ಕಾರ್ಮೋಡ ಕವಿದರೆ ಎಲ್ಲರೂ ದೇಶದ ಗೆಲುವಿಗೆ ತಮ್ಮ ಕೊಡುಗೆ ನೀಡಲು ಸಿದ್ಧರಿರಬೇಕೆಂದು ಕರೆನೀಡಿದರು.
ವಿದ್ಯಾರ್ಥಿಗಳು ಜೈಜವಾನ್ ಜೈಕಿಸಾನ್, ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಮುಗಿಲು ಮುಟ್ಟುವ ಹಾಗೆ ಮಾಡಿದ ಹರ್ಷೋದ್ಘಾರ ಅವರಲ್ಲಿಯ ರಾಷ್ಟ್ರಪ್ರೇಮ ಎದ್ದು ಕಾಣುವಂತೆ ಮಾಡಿತ್ತು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕಿ ಸುಮಾ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಶಿಕ್ಷಕ-ಶಿಕ್ಷಕಿಯರು ಮೊದಲಾದವರು ಉಪಸ್ಥಿತರಿದ್ದರು.