ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಮೂಹ ಸಂಸ್ಥೆಗಳಿಂದ 70ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವಿಠ್ಠಲ ಆರ್. ನಾಯಕರವರು ನೆರವೇರಿಸಿದರು. ನಂತರ ಮಾತನಾಡಿದ ಅವರು, ವಿಶ್ವದ ಆಡಳಿತ ವ್ಯವಸ್ಥೆಯಲ್ಲಿಯೇ ಅತ್ಯಂತ ಉತ್ತಮ ವ್ಯವಸ್ಥೆ ಎನಿಸಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಮ್ಮ ದೇಶವು ಅಳವಡಿಸಿಕೊಂಡಿದೆ. ಈ ದೇಶದಲ್ಲಿ ಸಾಮಾನ್ಯ ಪ್ರಜೆಯೂ ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಅರ್ಹನಾಗಿದ್ದಾನೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ವಿಶಿಷ್ಟ ಶಾಸ್ತ್ರ-ಸಂಪ್ರದಾಯಗಳನ್ನು ಪಾಲಿಸುವ ಹಾಗೂ ಆಚರಿಸುವ ಬ್ರಹತ್ ರಾಷ್ಟ್ರ ನಮ್ಮದು. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಸಂರಕ್ಷಕನಾಗಿರಬೇಕು. ದೇಶದ ಭವಿಷ್ಯದ ಕುಡಿಗಳಾಗಿರುವ ವಿದ್ಯಾರ್ಥಿಗಳಾದ ತಾವು ಸಂವಿಧಾನದಲ್ಲಿರಬೇಕಾದ ನಂಬಿಕೆ ಗೌರವವನ್ನು ಮೈಗೂಡಿಸಿಕೊಂಡು ರಾಷ್ಟ್ರದ ಪ್ರಗತಿಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡುವುದರ ಮೂಲಕ ಭಾರತವನ್ನು ಪರಮ ವೈಭವ ರಾಷ್ಟ್ರವನ್ನಾಗಿಸುವಲ್ಲಿ ಕಟಿಬದ್ಧರಾಗಬೇಕು ಎಂದರು.
ಸಂಸ್ಥೆಯ ವಿಶ್ವಸ್ಥರುಗಳಾದ ರಮೇಶ ಪ್ರಭು, ಡಾ. ವೆಂಕಟೇಶ ಶಾನಭಾಗ, ಗಜಾನನ ಕಿಣಿ, ನಿವೃತ್ತ ಮುಖ್ಯಾಧ್ಯಾಪಕರಾದ ಎಮ್.ಎಮ್.ಹೆಗಡೆ, ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶೈಕ್ಷಣಿಕ ಸಲಹೆಗಾರರು, ಪಾಲಕರು, ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಾಷ್ಟ್ರಭಕ್ತಿಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ರಾಷ್ಟ್ರಗೀತೆ, ವಂದೇ ಮಾತರಂ, ರೈತಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ತದನಂತರ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.