ಕುಮಟಾ: ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ವಿನೂತನ ಪ್ರಯೋಗಗಳ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ಕುಮಟಾದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ, ರೌಪ್ಯ ಮಹೋತ್ಸವದ ಈ ಸುಸಂದರ್ಭದಲ್ಲಿ, ‘ಹಳೆ ಬೇರು-ಹೊಸ ಚಿಗುರು’ ಎಂಬ ಶೀರ್ಷಿಕೆಯಡಿಯಲ್ಲಿ ಶೈಕ್ಷಣಿಕ ಪರಿಸರದಲ್ಲಿ ಮೊಮ್ಮಕ್ಕಳೊಂದಿಗೆ ಹಿರಿಯ ಚೇತನಗಳ ಅಪೂರ್ವ ಸಂಗಮ ಕಾರ್ಯಕ್ರಮ ಅಭೂತಪೂರ್ವವಾಗಿ ಜರುಗಿ ಯಶಸ್ವಿಯಾಯಿತು. ‘ದೀಪಾವಳಿ ಮೇಳ’ದ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಿಗ್ಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ, ಶಿಕ್ಷಣ ಪ್ರೇಮಿ ಹಾಗೂ ಗುರುಪ್ರಸಾದ ಪ್ರೌಢಶಾಲೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜಯಂತ ನಾಯ್ಕ ಉದ್ಘಾಟಿಸಿದರು. ಸಂಸ್ಥೆಯ ಕುರಿತಾಗಿ ಹೆಮ್ಮೆಯ ಮಾತಗಳನ್ನಾಡಿದ ಅವರು, ತಮ್ಮ ಮೊಮ್ಮಕ್ಕಳು ಇದೇ ಸಂಸ್ಥೆಯಲ್ಲಿ ಕಲಿಯುತ್ತಿದ್ದು ಅವರಲ್ಲಿ ಸಂಸ್ಕೃತಿ ಮೂಡುವಲ್ಲಿ ಶಿಕ್ಷಕರು ಹಾಗೂ ಸಂಸ್ಥೆಯವರ ಕಾರ್ಯ, ಕಾಳಜಿ ಶ್ಲಾಘನೀಯ ಎಂದು ನಿದರ್ಶನ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಜತ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿಗಳು ಹಾಗೂ ಚಲನಚಿತ್ರ ನಟರಾದ ಶ್ರೀ ಕಾಸರಗೋಡು ಚಿನ್ನಾರವರು, ಹಿಂದೆ ಮನೆಯಲ್ಲಿ ಅಜ್ಜಿಯ ಕಥೆ ಹೇಳುತ್ತಾ ಅಜ್ಜಿಯ ಕೋಣೆಯಲ್ಲಿ ಬೆಚ್ಚಗೆ ಮಲಗುತ್ತಿದ್ದ ಮೊಮ್ಮಕ್ಕಳಿರುತ್ತಿದ್ದರು. ಆದರೆ ಈಗ ಕೋಣೆಗಳ ಜೊತೆಗೆ ಮನಸ್ಸುಗಳೂ ಬೇರೆಯಾಗಿರುವುದು ಆಘಾತದ ವಿಷಯವಾಗಿದೆ. ಮಗುವಿನಲ್ಲಿ ಬೆಳೆಯುವ ಸಂಸ್ಕಾರದ ಮೂಲವೇ ಮನೆತನ. ಅಂತಹ ಮನೆತನವನ್ನು ಉಳಿಸಿದವರು ಪೂರ್ವಜರು. ಅಂತವರ ಒಡನಾಟ ಪ್ರತಿಯೊಬ್ಬರ ಬದುಕನ್ನು ಹಸನು ಮಾಡಿಬಿಡುತ್ತದೆ ಎಂದರು.
ಬಾಂಧವ್ಯ ಬೆಸೆಯಲು ಸಂಸ್ಥೆಯೊಂದು ಪ್ರಯತ್ನ ನಡೆಸುತ್ತಿರುವದು ಅತಿ ಹೆಮ್ಮೆಯ ವಿಷಯ. ಈ ಹಿಂದೆಲ್ಲಾ ದೇವಾಲಯಗಳಲ್ಲಿ ನಡೆಯುತ್ತಿದ್ದ ಕೀರ್ತನೆಗಳನ್ನು ಕೇಳಿ ಬರೆಯುತ್ತಿದ್ದೆವು. ಆದರೆ ಈಗ ಧಾರಾವಾಹಿ ದಾಸರಾಗುತ್ತಿರುವ ಮಕ್ಕಳು ಸಮಾಜದ ಬಂಧವನ್ನೇ ಕಡಿದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಫಾಸ್ಟ್ ಫುಡ್ ಹಾವಳಿಯಿಂದ ಇಂದಿನ ಮಕ್ಕಳು ನಲಗುತ್ತಿದ್ದಾರೆ. ಬಾಯಲ್ಲಿ ಬರುತ್ತಿದ್ದ ಶ್ಲೊÃಕಗಳು ಕಳೆದುಹೋಗಿ ಶೋಕ ಜೀವನ ತುಂಬುತ್ತಿದೆ, ಅಪ್ಪ-ಅಮ್ಮ-ಮಕ್ಕಳ ಮಧ್ಯದಲ್ಲಿ ಅಜ್ಜ-ಅಜ್ಜಿ ಇರದ ಪರಿಸ್ಥಿತಿ ಬಂದೊದಗಿದೆ. ವೃದ್ಧಾಶ್ರಮಗಳು ಹೆಚ್ಚುತ್ತಿದ್ದು ಬಾಂಧವ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇವೆಲ್ಲವನ್ನು ಗೆಲ್ಲುವ ಛಾತಿ ನಮ್ಮದಾಗಬೇಕು. ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಇಂತಹ ಕಾರ್ಯಕ್ರಮಗಳು ಬುನಾದಿಯಾಗಲಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಶ್ರೀ ಮುರಲೀಧರ ಪ್ರಭು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಿ.ಆರ್.ನಾಯಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಚೇತನರ ಬಾಂಧವ್ಯಕ್ಕೆ ಪೂರಕವಾದ ಮನರಂಜನಾ ಆಟಗಳು ಹಾಗೂ ಅನಿಸಿಕೆಯ ಅಭಿವ್ಯಕ್ತಿಯ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಹಿರಿಯ ಚೇತನರಿಗಾಗಿಯೇ ಸಾದರಪಡಿಸಿದ ಹರಿದಾಸರ ಕೀರ್ತನಾ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿದ್ದು ಕಾರ್ಯಕ್ರಮದ ವಿಶೇಷಗಳಲ್ಲೊಂದಾಗಿತ್ತು.