ಕುಮಟಾ: ಇತ್ತೀಚೆಗೆ ಕಾರವಾರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಂಕಣದ ಸಿ.ವಿ.ಎಸ್.ಕೆ ಪ್ರಾಢಶಾಲೆಯ ಸಾರ್ಥಕ ಪೈ 100ಮೀ. ಹಾಗೂ ಅನಿರುದ್ಧ ಭಟ್ಟಕೆರೆ 800ಮೀ. ಓಟದ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಯ ಅತೀ ವೇಗದ ಓಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದಕ್ಕೆ ಪೂರಕವೆಂಬಂತೆ, ಶಾಲೆಯ ಆದರ್ಶ ನಾಯ್ಕ ಹಾಗೂ ದೀಕ್ಷಾ ನಾಯ್ಕ ಇವರು ಕ್ರಮವಾಗಿ ತ್ರಿವಿಧ ಜಿಗಿತ ಮತ್ತು ಚದುರಂಗದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. 200ಮೀ. ಓಟದ ಸ್ಪರ್ಧೆಯಲ್ಲಿ ಸಂಕಲ್ಪ ನಾಯಕ ಈತನು ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಅರ್ಹನಾಗಿದ್ದಾನಲ್ಲದೆ, ಬಾಲಕಿಯರ 200ಮೀ. ರಿಲೇಯಲ್ಲಿ ಶಾಲೆಯು ದ್ವಿತೀಯ ಸ್ಥಾನಗೈದು ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ಶೈಲಿಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸುವಲ್ಲಿ ಹೆಸರುವಾಸಿಯಾಗಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯು ಈ ಮೂಲಕ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದಂತಾಗಿದೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಯಶಸ್ಸಿಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿಯರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿ, ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.