ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಗುರುಪೂರ್ಣಿಮೆಯನ್ನು ವಿದ್ಯಾರ್ಥಿಪ್ರತಿನಿಧಿಗಳು ಮತ್ತು ಶಿಕ್ಷಕ ವೃಂದದವರು ವ್ಯಾಸಪೂಜೆ ನೆರವೇರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಆಷಾಢ ಮಾಸದ ಹುಣ್ಣಿಮೆಯಂದು ಪ್ರತೀವರ್ಷ ಗುರುಪೂರ್ಣಿಮೆ ಆಚರಿಸಲಾಗುತ್ತದೆ. ಪ್ರಾರಂಭದಲ್ಲಿ ಕುಮಾರಿ ಶ್ರೇಯಾ ಹೆಬ್ಬಾರ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು. ಏಳನೇ ವರ್ಗದ ವಿದ್ಯಾರ್ಥಿ ಶುಭಾ ವಿಷ್ಣು ನಾಯ್ಕ ಗುರುಪೂರ್ಣಿಮೆಯ ಕುರಿತಾಗಿ ಮಾತನಾಡುತ್ತ. ಒಂದಕ್ಷರ ಕಲಿಸಿದವನೂ ಗುರುವಾಗುತ್ತಾನೆ. ಅಜ್ಞಾನದ ಕಣ್ಣಿಗೆ ಜ್ಞಾನದ ಅಂಜನ ಹಚ್ಚಿ ಕಣ್ಣು ತೆರೆಸುವವನು ಗುರು. ನಮ್ಮ ವಿದ್ಯಾರ್ಥಿಜೀವನದಲ್ಲಿ ಕಲಿಸುವ ಶಿಕ್ಷಕರೇ ನಮಗೆ ಗುರುವಿನ ಸ್ಥಾನದಲ್ಲಿ ಇರುವವರು. ಶಿಕ್ಷಕರನ್ನು ಗೌರವಿಸುವವರು ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು. ಹಿರಿಯರನ್ನು ಗುರುಗಳನ್ನು ಗೌರವಿಸಬೇಕು ಎಂದರು.
ಶಿಕ್ಷಕಿ ಸುವರ್ಣ ಮಯ್ಯರ್ ದಿಕ್ಸೂಚಿ ಮಾತನ್ನಾಡಿದರು. ಜಗತ್ತು ನಿಂತಿರುವುದು ಗುರುವಿನ ತತ್ವದ ಮೇಲೆ ಗುರು ಎಂದರೆ ಅಂಧಕಾರ ಕಳೆಯುವವನು, ಗುರುವೆಂದರೆ ಅಕ್ಷಯ, ಅದಮ್ಯ ಚೈತನ್ಯ, ಗುರುವಿಗೆ ವಂದನೆ ಮೊದಲು ಸಲ್ಲಬೇಕು ಎಂದರು. ಸನ್ಯಾಸಾಶ್ರಮ ಸ್ವೀಕರಿಸಿದ ಗುರುಗಳು ಚಾತುರ್ಮಾಸ್ಯ ವೃತ ಪ್ರಾರಂಭಿಸುವ ದಿನ. ಗುರುವಿನ ಕಡೆಗೆ ಶಿಷ್ಯರು ತೆರಳಿ ಗುರುಸೇವೆ ಮಾಡಬೇಕು. ಗುರುವಿಗೆ ಮಾಡುವ ಸೇವೆ ಬದುಕನ್ನು ಬಂಗಾರವಾಗಿಸುವುದು. ಗುರುವಿಲ್ಲದಿದ್ದರೆ ಬದುಕು ಬರಿಯ ಶೂನ್ಯ ಎನಿಸುವುದು. ಮಹಾಭಾರತವನ್ನು ಜಗತ್ತಿಗೆ ನೀಡಿದ ವ್ಯಾಸರನ್ನು ಪ್ರತಿಯೊಬ್ಬರೂ ಈದಿನ ಪೂಜಿಸುತ್ತಾರೆ. ಜಗತ್ತಿಗೆ ಬೆಳಕು ನೀಡಿದ ಗುರುವಿಗೆ ನಮನ ಸಲ್ಲಿಸೋಣ ಎಂದರು.
ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತಾ ನಾಯ್ಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದರು. ವಿದ್ಯಾರ್ಥಿಗಳು ಗುರುವಂದನೆ ಹಾಗೂ ಗುರುವಿನ ಮಹತ್ವಸಾರುವ ಭಜನೆಗಳನ್ನು ಹಾಡಿದರು. ಶಿಕ್ಷಕಿ ಮಹೇಶ್ವರಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಾಂಸ್ಕøತಿಕ ಸಮಿತಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು.
ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಪ್ರತಿನಿಧಿಗಳು ಮತ್ತು ಶಿಕ್ಷಕ ವೃಂದದವರು ವ್ಯಾಸಪೂಜೆ ನೆರವೇರಿಸಿದರು.